Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಕ್ಕರೆ ನಾಡಲ್ಲಿ `ಭುಜಂಗನ` ಹಾಡುಗಳ ಅನಾವರಣ
Posted date: 19 Tue, Jan 2016 – 03:19:39 PM

ವರುಣಾ ಮಹೇಶ್ ಅವರ ನಿರ್ಮಾಣದಲ್ಲಿ  ಮೂಡಿಬಂದಿರುವ ಹಾಗೂ ನಟ ಪ್ರಜ್ವಲ್ ದೇವರಾಜ್  ಒಬ್ಬ ಕಳ್ಳನಾಗಿ ಕಾಣಿಸಿಕೊಂಡಿರುವ, ಅವರ ಅಭಿನಯದ ೨೫ನೇ ಚಿತ್ರ ಕೂಡ ಆದಂತಹ    “ಭುಜಂಗ’ ಚಿತ್ರದ ಟ್ರೈಲರ್ ಹಾಗೂ ಧ್ವನಿ ಸುರುಳಿಯನ್ನು  ಸಕ್ಕರೆನಾಡು ಎಂದೇ ಖ್ಯಾತವಾಗಿರುವ ಮಂಡ್ಯ ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಮಂಡ್ಯ ಯೂಥ್ ಗ್ರೂಪ್‌ನ ಸಹಕಾರದೊಂದಿಗೆ  ವರ್ಣರಂಜಿತ ಸಮಾರಂಭದಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು.
ಮಂಡ್ಯ ಯೂತ್ ಗ್ರೂಪ್ ಆಯೋಜಿಸಿದ್ದ ‘ಮಂಡ್ಯ ಬಹುರುಚಿ ಮೇಳ’ ಕಾರ್ಯಕ್ರಮದಲ್ಲಿ  ಕಳೆದ ಭಾನುವಾರ ರಾತ್ರಿ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಮೇಘನಾ ರಾಜ್ ಅಭಿನಯಿಸಿರುವ “ಭುಜಂಗ’ ಚಿತ್ರದ ಹಾಡುಗಳ ದ್ವನಿಸುರುಳಿ ಬಿಡುಗಡೆ ಸಮಾರಂಭ ನೆರವೇರಿತು.  ಚಿತ್ರದ ನಾಯಕ ಪ್ರಜ್ವಲ್ ದೇವರಾಜ್, ನಾಯಕಿ ಮೇಘನಾ ರಾಜ್ ಸಮಾರಂಭದ  ಪ್ರಮುಖ ಸ್ಟಾರ್ ಆಕರ್ಷಣೆಯಾಗಿದ್ದರು. ಪ್ರಜ್ವಲ್ ಸಮಾರಂಭದ ವೇದಿಕೆ ಏರಿ ಜನರತ್ತ ಕೈಬೀಸುತ್ತಿದ್ದಂತೆಯೇ ನೆರೆದಿದ್ದ ಜನಸ್ತೋಮದ ಹರ್ಷೋದ್ಘಾರ ಮುಗಿಲು ಮುಟ್ಟಿತು. ಶಿಳ್ಳೆ, ಚಪ್ಪಾಳೆಯೊಂದಿಗೆ ನೆಚ್ಚಿನ  ನಟನಿಗೆ ಮಂಡ್ಯದ ಜನತೆ ಸ್ವಾಗತ ಕೋರಿದರು.
ಮಂಡ್ಯ ಭಾಷೆಯಲ್ಲಿ ‘ಅಣ್ತಮ್ಮ’ ಎನ್ನುತ್ತಲೇ ಮಾತಿಗಿಳಿದ ಪ್ರಜ್ವಲ್‌ದೇವರಾಜ್, ‘ಗೌಡ್ರು’ ಸಿನಿಮಾದ ಚಿತ್ರೀಕರಣ ಮಂಡ್ಯದ ಹಳ್ಳಿಯೊಂದರಲ್ಲಿ ನಡೆಯುತ್ತಿದ್ದಾಗ ನಾನು ನಮ್ಮ ತಂದೆ(ದೇವರಾಜ್)ಯೊಂದಿಗೆ ಬಂದಿದ್ದೆ. ಆಗ ಅಂಬರೀಷಣ್ಣ ನಿತ್ಯವೂ ಬಿರಿಯಾನಿ ತರಿಸುತ್ತಿದ್ದರು. ಆ ಬಿರಿಯಾನಿ ಬಹಳ ರುಚಿಯಾಗಿತ್ತು. ಆಗ ನಾನಿನ್ನೂ ಚಿಕ್ಕವನಾಗಿದ್ದೆ. ದೊಡ್ಡವನಾದ ಮೇಲೆ ಮಂಡ್ಯದಲ್ಲಿ ನನ್ನದೊಂದು ಚಿತ್ರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕೆಂಬ ದೊಡ್ಡ ಕನಸಿತ್ತು. ಅದು ಈಗ ನೆರವೇರಿದೆ ಎಂದು ಸಂತಸದಿಂದ ಹೇಳಿದರು.
 ‘ಭುಜಂಗ’ ನನ್ನ ಅಭಿನಯದ ೨೫ನೇ ಚಿತ್ರ. ತುಂಬಾ ಸೊಗಸಾಗಿ ಮೂಡಿಬಂದಿದೆ, ಇದೊಂದು ಮನರಂಜನಾತ್ಮಕ ಸಿನಿಮಾ. ಮಂಡ್ಯದ ಜನ ಚಿತ್ರವನ್ನು ನೋಡಿ ಬೆಂಬಲಿಸಬೇಕು. ಮತ್ತೊಂದು ವಿಷಯವೆಂದರೆ ಒಬ್ಬರನ್ನೊಬ್ಬರು ಕೈ ಹಿಡಿದಿರುವ ಚಿನ್ಹೆಯನ್ನು ಹೊಂದಿರುವ ಮಂಡ್ಯ ಯೂತ್ ಗ್ರೂಪ್‌ನ ಚಿನ್ಹೆ ಬಹಳ ವಿಶಿಷ್ಟವಾಗಿದೆ. ಯುವಕರನ್ನು ಒಗ್ಗೂಡಿಸುವ ಆಶಯ ನಿಜಕ್ಕೂ ಸಮಾಜದ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳಿದರು.
ಆನಂತರ ಮಾತಿಗಿಳಿದವರು ನಾಯಕಿ ಮೇಘನಾರಾಜ್. ಮಂಡ್ಯ ಸೊಗಡಿನ ಭಾಷೆಯೇ ಒಂದು ವಿಭಿನ್ನ ಶೈಲಿಯದ್ದು. ಅದೇ ಶೈಲಿಯನ್ನು ಒಳಗೊಂಡಿದ್ದ ‘ರಾಜಾಹುಲಿ’ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತು ಸೂಪರ್‌ಹಿಟ್ ಆಗಿತ್ತು. ಕನ್ನಡ ಭಾಷೆಯಂತೆ ಸಕ್ಕರೆ ಜಿಲ್ಲೆಯ ಜನರು ಸಿಹಿಯಾದವರು. ಮಂಡ್ಯದಲ್ಲಿ ಏನೇ ಕಾರ್ಯಕ್ರಮಗಳನ್ನು  ಮಾಡಿದರೂ ಅದಕ್ಕೆ ಯಶಸ್ಸು ಸಿಗುತ್ತದೆ ಎಂಬ ಮಾತಿದೆ. ಅದೇ ರೀತಿ ನಮ್ಮ ಚಿತ್ರವೂ ಶತದಿನೋತ್ಸವ ಆಚರಿಸಲಿದೆ ಎಂಬ ವಿಶ್ವಾಸ ಮೂಡಿದೆ ಎಂದರು.
ನಟ ತಬಲಾನಾಣಿ ಮಾತನಾಡಿ  ಉತ್ತಮ ಚಿತ್ರಗಳನ್ನು ಜನರು ಎಂದಿಗೂ ಸೋಲಿಸುವುದಿಲ್ಲ. ಮಂಡ್ಯದ ಜನರು ಕಲಾವಿದರನ್ನು ಕೈಹಿಡಿದು ನಡೆಸುವವರು. ಅವರ ಸಮ್ಮುಖದಲ್ಲಿ ‘ಭುಜಂಗ’ ಚಿತ್ರದ ಟ್ರೈಲರ್ ಮತ್ತು ಧ್ವನಿಸುರುಳಿ ಬಿಡುಗಡೆಯಾಗಿದೆ. ಹಾಗಾಗಿ ಚಿತ್ರ ಖಂಡಿತ ನೂರಾರು ದಿನ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.
ಬಳಿಕ ಬೃಹತ್ ಬೆಳ್ಳಿಪರದೆಯ ಮೇಲೆ ಭುಜಂಗ ಚಿತ್ರದ mಲರ್‌ಗೆ ಚಿತ್ರದ ನಿರ್ಮಾಪಕರಾದ ವರುಣಾ ಮಹೇಶ್ ಅವರು ಚಾಲನೆ ನೀಡಿದರು. ಚಿತ್ರದ ನಿರ್ದೇಶಕ ಜೀವಾ, ಕಥೆಗಾರ ಬಿ.ಎ.ಮಧು, ಹಿರಿಯ ನಟರಾದ ಸುಂದರ್‌ರಾಜ್, ಪ್ರಮೀಳಾ ಜೋಷಾಯ್, ಚಿತ್ರದ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ನಟ ಸಂತೋಷ್, ಐರಾವತ ನಿರ್ಮಾಪಕ ಸಂದೇಶ್, ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಸೇರಿದಂತೆ ಅನೇಕ ಪ್ರಮುಖರು ಈ ಕಲರ್‌ಫುಲ್ ಸಮಾರಂಭದಲ್ಲಿ  ಪಾಲ್ಗೊಂಡಿದ್ದರು.
ಮೈಸೂರಿನ ಲೆನಿನ್ ನೃತ್ಯ ತಂಡದವರು ‘ಭುಜಂಗ’ ಚಿತ್ರದ ಹಾಡುಗಳಿಗೆ ಸಖತ್ ಸ್ಟೆಪ್ಸ್ ಹಾಕಿ ನೆರೆದಿದ್ದ ಸಿನಿರಸಿಕರನ್ನು ರಂಜಿಸಿದರು. ಚಿದಂಬರ ನಾಟ್ಯ ಶಾಲೆ ತಂಡದ ಫ್ಯೂಜನ್ ನೃತ್ಯ, ಸರಿಗಮಪ ಲಿಟ್ಲ್ ಚಾಂಪ್ ವಿನ್ನರ್ ಸುಪ್ರಿಯಾ ಜೋಶಿ ಹಾಗೂ  ಮಂಡ್ಯದ ಗಾಯಕಿ ದಿಶಾಜೈನ್  ಹಲವಾರು ಜನಪ್ರಿಯ ಹಾಡುಗಳನ್ನು  ಅದ್ಭುತವಾಗಿ ಹಾಡುವುದರ ಮೂಲಕ ಸಮಾರಂಭಕ್ಕೆ  ಮತ್ತಷ್ಟು  ಕಳೆ ತಂದರು.


GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಕ್ಕರೆ ನಾಡಲ್ಲಿ `ಭುಜಂಗನ` ಹಾಡುಗಳ ಅನಾವರಣ - Chitratara.com
Copyright 2009 chitratara.com Reproduction is forbidden unless authorized. All rights reserved.